Shree Nidumamidi Jagadguru Matha

Shree Nidumamidi Jagadguru Matha Claimed

ಶ್ರೀ ನಿಡುಮಾಮಿಡಿ ಜಗದ್ಗುರು ಮಠ

Average Reviews

Description

ಶ್ರೀ ನಿಡುಮಾಮಿಡಿ ಜಗದ್ಗುರು ಮಠ – ಗೂಳೂರು ಮಹಾಸಂಸ್ಥಾನ

ಕರ್ತೃ – ಆದಿಜಗದ್ಗುರು ಶ್ರೀ ಚಂದ್ರಗುಂಡ ದೇಶಿಕೇಂದ್ರ ಶಿವಾಚಾರ್ಯ ಮಹಾಸನ್ನಿಧಿಯವರು

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿಗೆ ಸಮೀಪದಲ್ಲಿರುವ ಶ್ರೀ
ನಿಡುಮಾಮಿಡಿ ಮಹಾಸಂಸ್ಥಾನ ಮಠ ದಕ್ಷಿಣ ಭಾರತದ ಪ್ರಾಚೀನ ಹಾಗೂ ಪ್ರಮುಖ
ಪೀಠಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸುಮಾರು 11ನೇ ಶತಮಾನದಲ್ಲಿ
ಪ್ರಾರಂಭಗೊಂಡಿರಬಹುದಾದ ಶ್ರೀಪೀಠವು ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕವಾಗಿ
ಅಲ್ಲದೇ ಬಹುಮುಖ್ಯವಾಗಿ ಸಾಹಿತ್ಯಿಕವಾದ ಅಪಾರ ಸೇವೆಯನ್ನು ಸಮಾಜಕ್ಕೆ ಸಲ್ಲಿಸಿದೆ.
ಜಾತಿ, ಮತ, ಧರ್ಮ, ಭಾಷೆ, ಪ್ರಾಂತ್ಯ ಬೇದವಿಲ್ಲದೆ ಸರ್ವರನ್ನು ಸಮಾನ ದೃಷ್ಟಿಯಿಂದ
ಆದರಿಸಿರುವ ಶ್ರೀಮಠದ ಸಂಸ್ಥಾಪಕರು ಆದಿಗುರು ಶ್ರೀ ಜಗದ್ಗುರು ಚಂದ್ರಗುಂಡ
ದೇಶಿಕೇಂದ್ರ ಮಹಾಸನ್ನಿಧಿಯವರು.

ಹನ್ನೊಂದನೆಯ ಶತಮಾನದಲ್ಲಿ ಶ್ರೀ ಶೈಲದಲ್ಲಿದ್ದ ಶ್ರೀ ಚಂದ್ರಗುಂಡ ದೇಶಿಕೇಂದ್ರ
ಮಹಾಸನ್ನಿಧಿಯವರು ಲೋಕಸಂಚಾರದಲ್ಲಿ ಚೋಳಮಂಡಲ ಭಾಗವಾದ ಈಗಿನ
ಚಿಕ್ಕಬಳ್ಳಾಪುರ ಬಾಗೇಪಲ್ಲಿ ಭಾಗಕ್ಕೆ ಆಗಮಿಸಿದರು. ಮೊದಲು ನಂದಿಬೆಟ್ಟದಲ್ಲಿ
ತಪವನ್ನಾಚರಿಸಿ ಅಲ್ಲಿಂದ ಮುಂದೆ ಚಿಕ್ಕಬಳ್ಳಾಪುರದ ವಾಪಸಂದ್ರದಲ್ಲಿ ಕೆಲಕಾಲ ತಪಸ್ಸು
ಮಾಡಿ ನಂತರ ಗೂಳೂರಿಗೆ ಸಮೀಪದ ಉದ್ಯಾನದಲ್ಲಿ ಅನುಷ್ಠಾನಕ್ಕೆ ಕುಳಿತರು. ಈ
ಸಮಯದಲ್ಲಿ ಈ ಭಾಗದ ದೊರೆಯಾಗಿದ್ದ ಚೋಳ ರಾಜನ ಖಾಯಿಲೆಯನ್ನು ದೂರ
ಮಾಡಿ ದೀಕ್ಷೆ ನೀಡಿದರು. ಗುರುಗಳಿಂದ ದೀಕ್ಷಿತರಾದ ರಾಜನು ಪೂಜ್ಯರು ನೆಲೆಸಿದ್ದ
ಪ್ರದೇಶದಲ್ಲಿ ಧರ್ಮಗುರು ಪೀಠವನ್ನು ಕಟ್ಟಿಸಿ ಧಾರ್ಮಿಕ ಕಾರ್ಯಗಳಿಗೆ ನೆರವಾದನು
ಎಂದಿದೆ. ಮುಂದೆ ಗುರುಗಳು ಇಲ್ಲಿ ಚಂದ್ರಮೌಳೀಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ
ಇಲ್ಲಿಯೇ ಜೀವಂತ ಸಮಾಧಿಯಾದರೆಂದು ಮಠದ ಚರಿತ್ರೆಯಿಂದ ತಿಳಿಯುತ್ತದೆ.
ಶ್ರೀ ಚಂದ್ರಗುಂಡ ಶಿವಾಚಾರ್ಯರ ಬಗೆಗೆ ಇರುವ ಇನ್ನೊಂದು ಪ್ರತೀತಿಯ
ಪ್ರಕಾರ ಗುರುಗಳು ವಚನ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀ ದೇವರ ದಾಸಿಮಯ್ಯನವರ
ದೀಕ್ಷಾ ಗುರುಗಳಾಗಿದ್ದರೆಂದು ತಿಳಿದುಬರುತ್ತದೆ. ಇಂತಹ ಧರ್ಮಗುರು ಪೀಠದಲ್ಲಿ
ಈವರೆಗೂ 39 ಪೀಠಾಧೀಶರು ಸೇವೆ ಸಲ್ಲಿಸಿದ್ದು ಈಗಿನ ಶ್ರೀಗಳು 40ನೆಯವರೆಂದು
ಚರಿತ್ರೆಯಲ್ಲಿ ನಮೂದಾಗಿದೆ. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ.
ಶ್ರೀಮಠದ ಪರಂಪರೆಯಲ್ಲಿ ಬಂದಿರುವ ಗುರುಗಳು ಕರ್ನಾಟಕ, ಆಂದ್ರ,
ತಮಿಳುನಾಡುಗಳಲ್ಲಿ ಸಂಚರಿಸಿ ನೂರಾರು ಮಠಗಳನ್ನು ಸ್ಥಾಪಿಸಿ ಧರ್ಮಪ್ರಚಾರ
ನಡೆಸಿದ್ದಾರೆ.

ಸಾವಿರ ವರುಷಗಳ ಇತಿಹಾಸದ ಈ ಪೀಠದಲ್ಲಿ ಏಳು ಜನ ಪೀಠಾಧಿಪತಿಗಳು
ಅತ್ಯಂತ ಪ್ರಮುಖರು. 1) ಸಂಸ್ಥಾಪಕರಾದ ಶ್ರೀ ಚಂದ್ರಗುಂಡ ದೇಶಿಕೇಂದ್ರರು, 2) 12ನೇ
ಶತಮಾನದಲ್ಲಿದ್ದ ಶ್ರೀ ಕರಿಬಸವ ದೇಶಿಕೇಂದ್ರರು. ಇವರು ಮಹಾ ತಪಸ್ವಿಗಳು,
ಕ್ರಿಯಾಶೀಲರು, ಅಸಾದಾರಣ ವ್ಯಕ್ತಿತ್ತ್ವದ ಶ್ರೀ ಕರಿಬಸವ ದೇಶಿಕೇಂದ್ರರು ಹೊಯ್ಸಳ
ರಾಜಮನೆತನಕ್ಕೆ ರಾಜಗುರುಗಳಾಗಿದ್ದರು. ಇವರು ಶ್ರೀಮಠದ ಚರಪೀಠಾಧಿಪತಿಗಳೆಂದು ಗುರುತಿಸಲಾಗಿದ್ದು ಆಂಧ್ರಪ್ರದೇಶದ ಪೆನುಕೊಂಡೆ ಹತ್ತಿರದ ನಿಡಿಮಾಮಿಡಿಯಲ್ಲಿ ತಮ್ಮ
ಪವಾಡಗಳಿಂದ ಹೆಸರಾಗಿದ್ದರು. ಒಣಗಿದ ಮಾವಿನಮರವನ್ನು ಚಿಗುರಿಸಿ “ನೀಡು
ಮಾಮಿಡಿ” ಎಂದು ಭಿಕ್ಷೆ ಬೇಡಿ ಮಾವಿನ ಫಲವನ್ನು ಪಡೆದರೆಂದು ಹೇಳಲಾಗುತ್ತದೆ.
ಗುರುಗಳ ಈ ಮಹಿಮೆಯನ್ನು ಕೇಳಿ ಹೊಯ್ಸಳರಾಜ ಅಚ್ಯುತರಾಯರು ರಾಜಗುರುಗಳ
ಜ್ಞಾಪಕಾರ್ಥವಾಗಿ ಮಠವನ್ನು ನಿರ್ಮಿಸಿ ಕೊಟ್ಟರೆಂದು ಹೇಳಲಾಗುತ್ತದೆ. 3) ನಂತರ 14ನೇ
ಶತಮಾನದಲ್ಲಿ ವಿಜಯನಗರದ ಅರಸರಿಗೆ ಗುರುಗಳಾಗಿದ್ದ ಶ್ರೀ ಕಾಶಿವಿಲಾಸ ಕ್ರಿಯಾಶಕ್ತಿ
ಒಡೆಯರು ಹಕ್ಕ-ಬುಕ್ಕರಿಗೆ ವಿಜಯನಗರ ರಾಜ್ಯ ಕಟ್ಟಲು ನೆರವಾದರೆಂದು ತಿಳಿದುಬರುತ್ತದೆ.
4) 15ನೇ ಶತಮಾನದಲ್ಲಿದ್ದ ಶ್ರೀಮದ್ರಾಯ ರಾಜಗುರು ಶ್ರೀ ಚಂದ್ರಭೂಷಣ ದೇವ
ಒಡೆಯರು 5) ಹಂಡೆ ಅರಸರಿಗೆ ಕುಲಗುರುಗಳಾಗಿದ್ದ ಶ್ರೀ ಕರಿಬಸವೇಂದ್ರರು 6) ಹಿಂದಿನ
ಶ್ರೀಗಳಾದ ಡಾ. ಶ್ರೀ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಮಹಾಸನ್ನಿಧಿಯವರು
(ಜ.ಚ.ನಿ.) 7) ಈಗಿನ ಶ್ರೀಗಳಾದ ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳು.

ಶ್ರೀ ಜ.ಚ.ನಿ : ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಅಂಬಡಗಟ್ಟಿ
ಗ್ರಾಮದಲ್ಲಿ 1909ರ ಅಕ್ಟೋಬರ್ 20ರಂದು ಜನಿಸಿದ ರಾಚಯ್ಯ, ಹಾನಗಲ್ಲ ಶ್ರೀ ಗುರು
ಕುಮಾರ ಮಹಾಸ್ವಾಮಿಗಳ ಕೃಪಾದೃಷ್ಟಿಗೆ ಬಿದ್ದು ಶಿವಯೋಗ ಮಂದಿರದಲ್ಲಿ ಹನ್ನೆರಡು
ವರ್ಷಗಳ ಕಾಲ ನಡೆಸಿದ ಅಧ್ಯಯನದಲ್ಲಿ ಸಾಹಿತ್ಯ, ವ್ಯಾಕರಣ, ವೇದಾಂತ, ಸಾಂಖ್ಯಾ
ಶಾಸ್ತ್ರದಲ್ಲಿ ಪದವಿ ಪಡೆದರು. ವಿದ್ಯಾರ್ಥಿ ದೆಸೆಯಿಂದಲೂ ಆಶುಕವಿಗಳಾಗಿದ್ದ ಶ್ರೀಗಳು
1933ರಲ್ಲಿಯೇ ಕಾಳಿದಾಸನ “ಮಾಲವಿಕಾಗ್ನಿಮಿತ್ರಂ” ಎಂಬ ನಾಟಕವನ್ನು ಕನ್ನಡಕ್ಕೆ
ಅನುವಾದಿಸಿದ್ದರು. ಮುಂದೆ 1939ರ ಜೂನ್ ಹನ್ನೆರಡರಂದು ಮೈಸೂರಿನ ಅರಸರ
ಅನುಮತಿಯಂತೆ ಶ್ರೀ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ
ಮಹಾಸ್ವಾಮಿಗಳೆನ್ನುವ ನೂತನ ಅಭಿದಾನದೊಂದಿಗೆ ಗೂಳೂರಿನ ಶ್ರೀ ನಿಡುಮಾಮಿಡಿ
ಮಹಾಸಂಸ್ಥಾನ ಪೀಠವನ್ನಲಂಕರಿಸಿದ್ದರು.

ಶ್ರೀ ಜ.ಚ.ನಿಯವರು ಶ್ರೀಮಠದ ಗುರುಗಳಾಗಿ ಅಧಿಕಾರ ವಹಿಸಿಕೊಂಡಾಗ
ಶ್ರೀಮಠ ಅತ್ಯಂತ ರಿಕ್ತಾವಸ್ಥೆಯಲ್ಲಿದ್ದಿತ್ತು. ಅದರ ಬೊಕ್ಕಸ ಖಾಲಿಯಾಗಿದ್ದಿತ್ತು. ಶ್ರೀಮಠದ
ಜಮೀನನ್ನು ಬೇರೆಯವರು ಆಕ್ರಮಿಸಿಕೊಂಡಿದ್ದರು. ಶ್ರೀಮಠಕ್ಕೆ ಏನೇನೂ ಆದಾಯ ಇಲ್ಲದ
ಪರಿಸ್ಥಿತಿಯಲ್ಲಿ ಶ್ರೀಗಳು ಧೈರ್ಯಗೆಡದೆ ಪರಿಸ್ಥಿತಿಯನ್ನು ಎದುರಿಸಿದರು. ಶ್ರೀಮಠದ
ಉದ್ದಾರಕ್ಕಾಗಿ ತ್ರಿಕರಣಪೂರ್ವಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀಗಳು ಅದರಲ್ಲಿ
ಯಶಸ್ವಿಯೂ ಆದರು. ಶ್ರೀಗಳ ಪೂಜಾನುಷ್ಠಾನ, ನಯವಿನಯ ಸಂಪನ್ನತೆ, ಪ್ರತಿಭೆ-
ಪಾಂಡಿತ್ಯ ಮಾತುಗಾರಿಕೆ, ಸಾಹಿತ್ಯ ಸೇವೆಗಳಿಂದ ಆಕರ್ಷಿತರಾದ ಭಕ್ತಸಮೂಹ ದಿನದಿಂದ
ದಿನಕ್ಕೆ ಬೆಳೆಯಿತು. ಶ್ರೀಗಳ ಸಾಹಿತ್ಯ ರಚನೆಗಳ ಮಹಾಪೂರದಿಂದ ಶ್ರೀಮಠವು ಸರಸ್ವತಿಯ
ದೇಗುಲವಾಯಿತು. ಶ್ರೀಗಳು ಶ್ರೀಮಠದ ಪೀಠಾಧಿಪತಿಗಳಾಗಿದ್ದ 58 ವರ್ಷಗಳಷ್ಟು
ದೀರ್ಘಕಾಲ ಸಾಹಿತ್ಯದ ಜೊತೆಗೆ ಶ್ರೀಗಳು ಅನುಸಂಧಾನ ನಡೆಸಿದರು.. “ಸಾಹಿತ್ಯ
ಸೂರ್ಯ”ರಾಗಿ ಬೆಳಗಿದರು.

ಡಾ. ಶ್ರೀ ಜ.ಚ.ನಿಯವರು ಅನೇಕ ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸಿದರು.
ಅದರಲ್ಲಿ ಪ್ರಮುಖವಾಗಿ 1949ರಿಂದ ಪ್ರಾರಂಭವಾದ ಅವರ “ಆಧುನಿಕ ವಚನ”ಗಳ ರಚನೆ
1986ರವರೆಗೂ ಮುಂದುವರೆಯಿತು. “ಶ್ರೀ ನಿಡುಮಾಮಿಡಿ ಶ್ರೀಗಿರಿ ಸೂರ್ಯ
ಸಿಂಹಾಸನಾಧೀಶ್ವರಾ” ಎಂಬ ಅಂಕಿತದಲ್ಲಿ ಆಧುನಿಕ ವಚನಗಳ 12 ಸಂಪುಟಗಳಲ್ಲಿ
ಸುಮಾರು 6000ಕ್ಕೂ ಹೆಚ್ಚಿನ ವಚನಗಳನ್ನು ರಚಿಸಿದರು. ಇದಲ್ಲದೇ ಹದಿನೆಂಟು
ಸಂಕಲನಗಳ ಮೂಲಕ ಒಂದು ಸಾವಿರ ಕವನಗಳು, ಮೂರು ಮಹಾಕಾವ್ಯಗಳು, ನಾಲ್ಕು
ಕಾವ್ಯಗಳು, ಹನ್ನೊಂದು ಲಾಕ್ಷಣಿಕ ಕೃತಿಗಳು, ಹದಿನಾರು ಸಂಶೋಧನಾ ಗ್ರಂಥಗಳು
ಹದಿನೆಂಟು ಚರಿತ್ರಾಗ್ರಂಥಗಳು, ಮೂವತ್ತಾರು ವಿಮರ್ಶಾ ಗ್ರಂಥಗಳು, ಹನ್ನೆರಡು ಸಮೀಕ್ಷಾ
ಗ್ರಂಥಗಳು, ಅರವತ್ತು ತಾತ್ತ್ವಿಕ ಪ್ರಬಂಧ ಸಾಹಿತ್ಯ ಹೀಗೆ ಮೂರುನೂರು ಕೃತಿಗಳನ್ನು ರಚಿಸಿ
ಪ್ರಕಟಿಸಿದರು. ಶ್ರೀಗಳವರು ನಿಜಗುಣ ಶಿವಯೋಗಿಗಳ ಪ್ರಸಿದ್ದ ಸ್ವರವಚನ ಸಂಕಲನವಾದ
“ಕೈವಲ್ಯ ಪದ್ಧತಿ”ಗೆ ದೊಡ್ಡ ಪ್ರಮಾಣದಲ್ಲಿ ಪ್ರದೀಪಿಕೆ ಬರೆಯುವ ಮೂಲಕ ತಮ್ಮ ಪ್ರತಿಭೆ
ಪಾಂಡಿತ್ಯವನ್ನು ಮೆರೆದಿರುವರು.

ಶ್ರೀ ಜ.ಚ.ನಿಯವರು ಮಹಿಳಾ ಸಬಲೀಕರಣಕ್ಕೆ ಬಹುವಾಗಿ ಗಮನ ನೀಡಿದವರು.
ಅಕ್ಕನ ಬಳಗ, ಭ್ರಮರಾಂಬ ಬಳಗ, ಮಲ್ಲಿಕಾಂಬಾ ಮಂಡಳಿ ಇತ್ಯಾದಿ ಮಹಿಳಾ
ಸಂಘಗಳನ್ನು ಸ್ಥಾಪಿಸಿದರು. ಮಹಿಳಾ ವಚನಕಾರ್ತಿಯರನ್ನು, ವಚನಕಾರರನ್ನು
ರೂಪಿಸಿದರು. ಶಿವಾಚಾರಿಣೆಯರ ಸಮಾಜವನ್ನು ಸ್ಥಾಪಿಸಿದರು. 1949ರಲ್ಲಿ ಬೆಂಗಳೂರಿನಲ್ಲಿ
ನಿಡುಮಾಮಿಡಿ ಮಠವನ್ನು ಸ್ಥಾಪಿಸಿದ ಶ್ರೀಗಳು 1968ರಲ್ಲಿ ಶ್ರೀ ವೀರಶೈವ ತತ್ತ್ವ ಪ್ರಚಾರ
ಸಂಘವನ್ನು ಸ್ಥಾಪಿಸಿದರು. ಪೀಠದಿಂದ “ಮಾಮಿಡಿ” ಎಂಬ ತ್ರೈಮಾಸಿಕವನ್ನು 1980ರಲ್ಲಿ
ಪ್ರಾರಂಭಿಸಿದರು. ಶ್ರೀ ಜ.ಚ.ನಿ ಅಧ್ಯಯನ ಪೀಠ & ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿ
ಉಯೋನ್ಮುಖ ಲೇಖಕರ ಹಾಗೂ ಸಂಶೋಧಕರ ನೂರಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
ಪೀಠದ ಆಶ್ರಯದಲ್ಲಿ ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು, ಅನೇಕ ವಿಚಾರ
ಸಂಕಿರಣಗಳನ್ನು ಏರ್ಪಡಿಸಿದರು. “ವಿಭೂತಿ”, “ದಾಸೋಹ” ಎಂಬ ವಿದ್ವತ್
ಸಂಪುಟಗಳನ್ನು ಪ್ರಕಟಿಸಿದರು. ಹೀಗೆ ತಮ್ಮ ದಣಿವರಿಯದ ಸಾಹಿತ್ಯ ಹಾಗೂ ಸಾಮಾಜಿಕ
ಸೇವೆಯಿಂದಾಗಿ ಶ್ರೀಗಳು ಸಮಾಜದ ಹೆಗ್ಗುರುತಾದರು.

ಶ್ರೀ ಜ.ಚ.ನಿಯವರ “ಜೀವನ ಸಿದ್ದಾಂತ” ಎಂಬ ಮೇರು ಕೃತಿಗೆ ಮೈಸೂರು
ವಿಶ್ವವಿದ್ಯಾನಿಲಯ 1972ರಲ್ಲಿ ಡಿ.ಲಿಟ್ ಪ್ರಶಸ್ತಿ ನೀಡಿ ಗೌರವಿಸಿದೆ. ರಾಜ್ಯ ಸಾಹಿತ್ಯ ಅಕಾಡೆಮಿ,
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳೂ ಸೇರಿದಂತೆ ನಾಡಿನ ಸುಮಾರು 36 ಸಂಸ್ಥೆಗಳು
ಗುರುಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಐದು ದಶಕಗಳಿಗೂ ಮೀರಿದ ದೀರ್ಘ
ಅವಧಿಯಲ್ಲಿ ಅಪಾರ ಕೆಲಸವನ್ನು ಮಾಡಿ ಸಾರ್ಥಕ ಬದುಕನ್ನು ಕಂಡ ಡಾ|| ಶ್ರೀ
ಜ.ಚ.ನಿ.ಯವರು 1990ರ ಡಿಸಂಬರ್ 27ರಲ್ಲಿ ಶ್ರೀಮಠಕ್ಕೆ ತಮ್ಮ ಉತ್ತರಾಧಿಕಾರಿಯನ್ನಾಗಿ
ಪ್ರಗತಿಪರ ಚಿಂತನಾದೃಷ್ಟಿಯ ಪೂಜ್ಯ ಶ್ರೀ ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳನ್ನು
ಪೀಠದಲ್ಲಿ ಸಂಸ್ಥಾಪಿಸಿದರು. ಇಂತಹ ಸಾರ್ಥಕ ಮೌಲಿಕ ಬದುಕನ್ನು ಬಾಳಿ 1996ರ ನವೆಂಬರ್ 5ರ ಮಂಗಳವಾರದಂದು ಶ್ರೀಗಳು ಶಿವನೊಳಗಾದರು. ಪೂಜ್ಯರ ಗದ್ದುಗೆಯು
ಶ್ರೀ ಪೀಠದಲ್ಲಿದ್ದು ಜಾಗೃತ ಸ್ಥಳವಾಗಿದೆ.
ಡಾ|| ಶ್ರೀ ಜ.ಚ. ನಿಯವರ ಉತ್ತರಾಧಿಕಾರಿಗಳಾಗಿ ಬಂದ ಶ್ರೀ ಶ್ರೀ ವೀರಭದ್ರ
ಚನ್ನಮಲ್ಲ ಮಹಾಸ್ವಾಮಿಗಳು ಪೀಠಾಧಿಕಾರದ ಸಂದರ್ಭದಲ್ಲಿಯೇ “ನಾನು ಪ್ರಾಣ
ಇರುವವರೆಗೆ ಜಗದ್ಗುರುವೆಂದು ಕರೆದುಕೊಳ್ಳುವುದಿಲ್ಲ, ಪಲ್ಲಕ್ಕಿ ಹತ್ತುವುದಿಲ್ಲ, ಕಿರೀಟ
ಧರಿಸುವುದಿಲ್ಲ” ಎಂದು ಪ್ರತಿಜ್ಞೆ ಮಾಡಿ ಅದರಂತೆ ನಡೆಯುತ್ತಿರುವ ಧೀಮಂತರು.
ಗುರುಗಳಂತೆಯೇ ಪ್ರಗತಿಪರ, ಮಾನವೀಯ, ಸಮಾಜಮುಖಿ ವ್ಯಕ್ತಿತ್ತ್ವದ ಶ್ರೀಗಳು ತಮ್ಮ
ಜೀವನವನ್ನೇ ದೀನ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಸ್ತ್ರೀಯರ ಹಿತಕ್ಕಾಗಿ
ಹೋರಾಡಲು ಮೀಸಲಿಟ್ಟಿದ್ದಾರೆ. ಶ್ರೀಮಠದಲ್ಲಿ 1991ರಲ್ಲಿಯೇ ದಲಿತ ಮಕ್ಕಳಿಗೆ ಆಶ್ರಯ
ಕಲ್ಪಿಸಿ, ಉಚಿತ ಊಟ, ವಿದ್ಯಾಭ್ಯಾಸವನ್ನು ನೀಡಲು ಪ್ರಾರಂಭಿಸಿದರು. ಮಠದಲ್ಲಿನ ಶ್ರೀ
ವೀರಭದ್ರಸ್ವಾಮಿ ದೇವಾಲಯದಲ್ಲಿ ಗರ್ಭಗುಡಿಗೆ ಹೋಗಿ ಪ್ರತಿಯೊಬ್ಬರಿಗೂ ದೇವರನ್ನು
ಮುಟ್ಟಿ ಪೂಜಿಸುವ ಅವಕಾಶ ಕಲ್ಪಿಸಿದರು. ಜಾತಿ-ಮತ ಭೇದವಿಲ್ಲದೇ ಸಹಪಂಕ್ತಿ
ಬೋಜನದ ವ್ಯವಸ್ಥೆಯನ್ನು ಕಲ್ಪಿಸಿದರು.

ಶ್ರೀಗಳು ತಮ್ಮ ಸಮಾಜಮುಖಿ ಕಾರ್ಯಗಳ ಜೊತೆಯಲ್ಲಿ ಪ್ರತಿಯೊಬ್ಬರಿಗೂ
ಶಿಕ್ಷಣ ದೊರಕಬೇಕೆಂದು ಹೋರಾಡುತ್ತಿದ್ದಾರೆ. ಮತ್ತೊಬ್ಬರಿಗೆ ಮಾದರಿಯಾಗಿ ಡೊನೇಷನ್
ತೆಗೆದುಕೊಳ್ಳದೇ ಉಚಿತ ಶಿಕ್ಷಣವನ್ನು ನೀಡುತ್ತಿದ್ದಾರೆ. 1991ರಲ್ಲಿ ಡಾ. ಶ್ರೀ ಜ.ಚ.ನಿ ರಾಷ್ಟ್ರೀಯ
ಸೇವಾಪೀಠ ಎಂಬ ಟ್ರಸ್ಟ್ ನೋಂದಣಿ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಅನೇಕ ಶೈಕ್ಷಣಿಕ
ಹಾಗೂ ಸಾಮಾಜಿಕ ಸೇವಾ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ದೇವಸ್ಥಾನ, ಮಠ, ಮಂದಿರ
ಕಟ್ಟುವುದಕ್ಕಿಂತ ಶಾಲೆ, ಕಾಲೇಜು, ಆಸ್ಪತ್ರೆಗಳನ್ನು ಕಟ್ಟುವುದೇ ನಿಜವಾದ ದೇವರ ಪೂಜೆ
ಎಂಬುದನ್ನು ಪ್ರತಿಪಾದಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಮಠದಲ್ಲಿ 500 ಜನ ಎಸ್.ಸಿ. / ಎಸ್.ಟಿ.,
ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.
ದೇವರಿಗೆ ಸಲ್ಲಿಸುತ್ತಿದ್ದ ಸಾಂಪ್ರದಾಯಿಕ ಪೂಜಾ ವಿಧಾನಗಳಿಗೆ ಬದಲಾಗಿ
ಕನ್ನಡದಲ್ಲಿ ಮಂತ್ರ ಹೇಳುವ ಕ್ರಮವನ್ನು ಆಚರಣೆಗೆ ತಂದಿದ್ದಾರೆ. ಮುಹೂರ್ತ, ಮಂತ್ರ,
ವರದಕ್ಷಿಣೆ ರಹಿತ ಮದುವೆಗಳಿಗೆ ಮಾತ್ರ ಹಾಜರಾಗುವ ಸ್ವಾಮೀಜಿ ಕನ್ನಡದಲ್ಲಿ ಪ್ರಮಾಣ
ವಚನದ ಮೂಲಕ ನಡೆಸುವ ಸರಳ ವಿವಾಹ ಪದ್ಧತಿಯನ್ನು ರೂಪಿಸಿದ್ದಾರೆ. ನೂರಾರು
ವಿಧವಾ, ಅಂತರ್ಜಾತಿ ವಿವಾಹಗಳನ್ನು ನಡೆಸಿಕೊಟ್ಟಿದ್ದಾರೆ. ದಲಿತರು, ಹಿಂದುಳಿದವರು,
ಅಲ್ಪಸಂಖ್ಯಾತ ಸಮುದಾಯದವರೊಂದಿಗೆ ಬೆರೆತು ಅವರ ಮನೆಗಳಲ್ಲಿ ಊಟ ಮಾಡುವ
ಸ್ವಾಮೀಜಿ ಸರಳ ಸಾಧಾರಣ ಬದುಕನ್ನು ಬಾಳುತ್ತಿದ್ದಾರೆ. ಎಲ್ಲಿಯೂ ಆಡಂಬರದ ಬದುಕನ್ನು
ವಿರೋಧಿಸುವ ಶ್ರೀಗಳು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ. “ಒಂದೇ ಒಂದು
ಜಾತಿ ಮಾನವ ಜಾತಿ, ಒಂದೇ ಒಂದು ಧರ್ಮ ಮಾನವ ಧರ್ಮ” ಎಂಬ ತತ್ತ್ವದಲ್ಲಿ
ನಂಬಿಕೆ ಇರಿಸಿರುವ ಸ್ವಾಮೀಜಿ ಸಮಾನತೆ, ಸಾಮಾಜಿಕ ನ್ಯಾಯ, ಕೋಮುಸೌಹಾರ್ದ,
ಮಾನವೀಯತೆಯ ಪ್ರಸಾರಕರಾಗಿದ್ದಾರೆ.

ತಮ್ಮ ಹೋರಾಟಗಳಿಂದಲೇ ಮನೆ ಮಾತಾಗಿರುವ ಶ್ರೀಗಳು ಪೀಠಕ್ಕೆ
ಬಂದಾಗಿನಿಂದ ಅನೇಕ ರಾಜ್ಯ ಮಟ್ಟದ ಸಮ್ಮೆಳನ, ಸಮಾರಂಭಗಳನ್ನು ಹಾಗೂ ನೂರಾರು
ಕಾರ್ಯಕ್ರಮಗಳನ್ನು ಪೀಠದ ವತಿಯಿಂದ ನಡೆಸಿದ್ದಾರೆ. ದೇವದಾಸಿ ಪದ್ಧತಿ, ಮಡೆ ಮಡೆ
ಸ್ನಾನಗಳಂತಹ ಮೌಢ್ಯ ಆಚರಣೆಗಳ ವಿರುದ್ದ ಜನ ಜಾಗೃತಿ ಹೋರಾಟಗಳನ್ನು ರೂಪಿಸಿ
ಯಶಸ್ವಿಗೊಳಿಸುತ್ತಾ ಬಂದಿದ್ದಾರೆ. ಡಾ. ಶ್ರೀ ಜ.ಚ.ನಿ. ರಾಷ್ಟ್ರೀಯ ಸೇವಾ ಪೀಠ ಟ್ರಸ್ಟ್
ಅಡಿಯಲ್ಲಿ 60 ಪ್ರಾಥಮಿಕ ಶಾಲೆಗಳು, 5 ವಸತಿ ಸಹಿತ ಶಾಲೆಗಳು, 3 ಪದವಿ ಪೂರ್ವ
ಕಾಲೇಜುಗಳು, 2 ಪದವಿ ಕಾಲೇಜು, ಬಿ.ಎಡ್. ಕಾಲೇಜ್, ವೃದ್ಧಾಶ್ರಮ, ಅನಾಥಾಶ್ರಮ, ವೃತ್ತಿ
ತರಬೇತಿ ಕೇಂದ್ರ ಇತ್ಯಾದಿ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
ತಮ್ಮ ಭಾಷಣಗಳ ಪ್ರಖರತೆಯಿಂದ ಹೆಸರಾಗಿರುವ ಶ್ರೀಗಳು ತಮ್ಮ ಗ್ರಂಥಗಳ
ಮೂಲಕವು ಜನರನ್ನು ಜಾಗೃತಗೊಳಿಸುತ್ತಿದ್ದಾರೆ. ವ್ಯಾಸಂಗ, ಅಂತರ, ಚಿಂತನ ಚೇತನ,
ಮಠಾದೀಶ್ವರ ಮರ್ಮ, ಸಹಜ ಜೀವಿಗಳು, ಒಲವು-ನಿಲುವು, ನಲ್ವರಿಕೆ, ಶಿವಸಾಹಿತ್ಯ
ಸೂರ್ಯ ಜ.ಚ.ನಿ., ಶಿವಸಂಸ್ಕøತಿ ಒಂದು ಚಿಂತನೆ, ಗುರುಚೈತನ್ಯ, ಸುಳ್ಳು ಸೃಷ್ಠಿಗಳು,
ಪಂಚಾಚಾರ್ಯರ ಪೂರ್ವಾಗ್ರಹಗಳು, ಮತಾಂದತೆ ಮಾನವೀಯತೆ, ಹಿಂದೂ ಧರ್ಮ
ಪರಿಷ್ಕಾರವಾಗಬೇಕು, ಅರಿವಿನ ಹಾದಿಯಲ್ಲಿ ಮುಂತಾದ ಸಾಹಿತ್ಯಿಕ ಕೃತಿಗಳನ್ನು ರಚಿಸಿದ್ದಾರೆ.
ತಮ್ಮ ಗುರುಗಳಾದ ಡಾ|| ಶ್ರೀ ಜ.ಚ.ನಿಯವರ ಸಮಗ್ರ ಸಾಹಿತ್ಯವನ್ನು 27
ಮಹಾಸಂಪುಟಗಳಲ್ಲಿ ಮುದ್ರಿಸಿ ಹೊರತಂದಿದ್ದಾರೆ. ಈ ರೀತಿಯಾಗಿ ತಮ್ಮ ಸಾಮಾಜಿಕ,
ಧಾರ್ಮಿಕ, ಸಾಹಿತ್ಯಿಕ ಕಾರ್ಯಚಟುವಟಿಕೆಗಳ ಮುಖೇನ ಸಮಾಜದ ಜಾಗೃತಿಗಾಗಿ
ಹೋರಾಡುತ್ತಿರುವ ಶ್ರೀಗಳ ಕಾರ್ಯ ಸ್ತುತ್ಯರ್ಹ.

ಶ್ರೀಗಳಿಗೆ ಸಂದಿರುವ ಪ್ರಶಸ್ತಿ ಸನ್ಮಾನಗಳು
1. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2004
2. ಡಿ. ದೇವರಾಜ ಅರಸು ಪ್ರಶಸ್ತಿ 2005
3. ಶ್ರೀ ಬಸವೇಶ್ವರ ಪ್ರಶಸ್ತಿ 2007
4. ಬಸವ ರಾಷ್ಟ್ರೀಯ ಪುರಸ್ಕಾರ 2015
5. ದೇಶ ಸ್ನೇಹಿ ಪ್ರಶಸ್ತಿ 2015

ಶ್ರೀಗಳ ಮೇಲೆ ಪ್ರಬಂಧ ಮಂಡಿಸಿ ಪಿ.ಎಚ್.ಡಿ. ಪಡೆದುಕೊಂಡಿರುವುದು
1. ಹೆಸರು : ಶ್ರೀ ಸುರೇಶ್ ಕಾಶಪ್ಪ ರಾಜನಹಳ್ಳಿ
ವಿಶ್ವವಿದ್ಯಾನಿಲಯ : ಗುಲ್ಬರ್ಗ ವಿಶ್ವವಿದ್ಯಾನಿಲಯ (2010)
ವಿಷಯ : “ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಜೀವನ ಮತ್ತು ಸಾಹಿತ್ಯ ಸೇವೆ”
2. ಹೆಸರು : ಶ್ರೀ ಕೆ.ಎಂ. ನಯಾಜ್ ಅಹಮ್ಮದ್
ವಿಶ್ವವಿದ್ಯಾನಿಲಯ : ಬೆಂಗಳೂರು ವಿಶ್ವವಿದ್ಯಾನಿಲಯ (2012)
ವಿಷಯ : “In the context of People Struggles the Life & Writings of
Sree Veerabhadra Channamalla Swamiji”

1936ರಲ್ಲಿ ಪ್ರಕಟವಾದ ಎಸ್.ಎಂ. ಹಂಪಯ್ಯ ಶಿಡ್ಲಘಟ್ಟರವರ “ಶ್ರೀ ನಿಡುಮಾಮಿಡಿ
ಸ್ವಾಮಿಗಳವರ ಸಂಕ್ಷಿಪ್ತ ಚರಿತ್ರೆ” ಎಂಬ ಗ್ರಂಥದಲ್ಲಿ ನಮೂದಾಗಿರುವ ಶಾಖಾ ಮಠಗಳು.

ಮೈಸೂರು ಸೀಮೆಯಲ್ಲಿ : ಗೂಳೂರು, ಗುಡಿಬಂಡೆ, ಚಿಕ್ಕಬಳ್ಳಾಪುರ ಬಳಿ ವಾಪಸಂದ್ರ,
ದೊಡ್ಡಬಳ್ಳಾಪುರ, ಶಿಡ್ಲಘಟ್ಟ, ಕೋಲಾರ, ಕೂಗೋನಹಳ್ಳಿ, ಮಲದೇವನಕೆರೆ, ಮಾಗಡಿ,
ಗುವಾಳಾಪುರ, ಬೆಂಗಳೂರು, ಮೈಸೂರು, ನಂಜನಗೂಡು, ತಲಕಾಡು, ಮುಡುಕುತೊರೆ,
ತುಮಕೂರು, ಚಳ್ಳಕೆರೆ, ಶಿರಾ, ಹಾಲೇನಹಳ್ಳಿ, ಐತಾಂಡಹಳ್ಳಿ, ಶಿವಗಂಗಾ, ನಾಯ್ಕನಹಟ್ಟಿ.

ಮದ್ರಾಸ್ ಸೀಮೆಯಲ್ಲಿ : ಮದ್ರಾಸ್, ಕಾಂಚೀಕ್ಷೇತ್ರ, ಕುಂಬಕೋಣಂ, ಸೇಲಂ, ತಿಮ್ಮಂಪೇಟೆ,
ಕುಪ್ಪಂ, ಗಜನಾಂಪಟ್ಟಿ, ಬೆಜವಾಡ, ಬಳ್ಳಾರಿ, ಹೊಸಪೇಟೆ, ಬಾವಿಹಳ್ಳಿ, ಅನಂತಪುರಂ,
ಕರ್ನೂಲು, ಧರ್ಮಾವರಂ, ಶ್ರೀಶೈಲ, ನಾಗಮಾಟಿ, ಕಲ್ಯಾಣದುರ್ಗಂ, ಕಂಬಾಳಪಲ್ಲಿ,
ಪಾಮದುರ್ತಿ, ತಾಡಪರ್ತಿ, ಉರವಕೊಂಡ, ನಿಡಿಮಾಮಿಡಿ, ಕೊಡಿಕೊಂಡ,
ಗೋಡಲಾಪುರಂ, ಮಡಕಶಿರಾ, ಪುಂಗನೂರು ಸಂಸ್ಥಾನಂ, ಕನ್ನುಮುಕ್ಕಲ.

ಬೊಂಬಾಯ ಸೀಮೆಯಲ್ಲಿ : ಹುಬ್ಬಳ್ಳಿ, ಧಾರವಾಡ, ರಾಯಚೋಟಿ, ಕೊಟ್ಟೂರು, ಶಿರಹಟ್ಟಿ,
ಬಿದರೆ, ಮೆಳಹಟ್ಟಿ.

ಹೈದರಾಬಾದ್ ಸೀಮೆಯಲ್ಲಿ : ಹೈದರಾಬಾದ್, ಗುಲ್ಬರ್ಗ, ರಾಯಚೂರು, ನಿಡದಹಳ್ಳಿ,
ಬಳಿಗಾನೂರು, ಗುಂಜಹಳ್ಳಿ.

ದಕ್ಷಿಣ ಇಂಡಿಯಾದಲ್ಲಿ : ಅರುಣಾಚಲಂ, ಚಿದಂಬರಂ, ರಾಮೇಶ್ವರಂ, ಕಾಳಹಸ್ತಿ, ಮಧುರಾ.

ಉತ್ತರ ಇಂಡಿಯಾದಲ್ಲಿ : ಶ್ರೀ ಕಾಶಿ ಕ್ಷೇತ್ರ ಮುಂತಾದ ಸ್ಥಳಗಳು

Swamiji

Swamiji Name :
ಶ್ರೀ ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳು
Date of Birth :
01-06-1960
Place :
ಚಿತ್ರದುರ್ಗ
Pattadikara :
12-12-1990
Photo :

Programs

ಪ್ರತಿ ಸೋಮವಾರಗಳಂದು ವಿಶೇಷ ಪೂಜೆ
ರಥ ಸಪ್ತಮಿ ಕಾರ್ಯಕ್ರಮ
ಮಹಾಶಿವರಾತ್ರಿಗೆ ವಿಶೇಷ ಪೂಜೆ, ಆಚರಣೆ
ಅಕ್ಟೋಬರ್ 20ರಂದು ಶ್ರೀ ಜ.ಚ.ನಿ. ಜಯಂತಿ ಆಚರಣೆ

Photos

Full Address Kannada

ಗೂಳೂರು ಮಹಾಸಂಸ್ಥಾನ - 561 218
ಬಾಗೇಪಲ್ಲಿ ತಾ||, ಚಿಕ್ಕಬಳ್ಳಾಪುರ ಜಿಲ್ಲೆ

Map

Near by Places

ಬಾಗೇಪಲ್ಲಿ - 14 ಕಿ.ಮೀ.
ಚಿಕ್ಕಬಳ್ಳಾಪುರ - 49 ಕಿ.ಮೀ.
ದೇವನಹಳ್ಳಿ - 72 ಕಿ.ಮೀ.
ನಂದಿಬೆಟ್ಟ - 78 ಕಿ.ಮೀ.

Statistic

174 Views
0 Rating
0 Favorite
1 Share
error: Content is protected !!